ಹಿರಿಯ ಪತ್ರಕರ್ತ ಸೀತಾರಾಮ ನಿರ್ಗಮನ!
Posted date: 16 Wed, Sep 2015 – 09:20:44 AM

ಕನ್ನಡ ಚಲನಚಿತ್ರ ಮಾಧ್ಯಮದ  ಹಿರಿಯ ಪತ್ರಕರ್ತ ‘ಟೆರ್ರರ್’ ಆಗಿದ್ದವರು ಸಿ ಸೀತಾರಾಮ್. ಇವರು ಡಾ ಸೀತಾರಾಂ ಸಹ. ನಿರ್ದೇಶಕ ಎನ್ ಲಕ್ಷ್ಮಿನಾರಾಯಣ ಅವರ ಬಗ್ಗೆ ತೀಸಿಸ್ ಬರೆದು ಬೆಂಗಳೂರು ವಿಶ್ವವಿಧ್ಯಾನಿಲಯ ಇಂದ ಡಾಕ್ಟರೇಟ್ ಪಡೆದವರು. ಕನ್ನಡ ಪ್ರಭ ಪತ್ರಿಕೆಯ ‘ಚಿತ್ರ ಪ್ರಭ’ ಸಿ ಸೀತಾರಾಂ ಅಂದರೆ ಹೆಚ್ಚು ಸೂಕ್ತ.

‘ನಾನು ಮುಂದಿನ ಜನ್ಮದಲ್ಲಿ ಒಂದು ಹುಳುವಾಗಿ ಹುಟ್ಟುವುದು’ – ಇದು ಸೀತಾರಾಂ ಅವರು ಕನ್ನಡ ಸಿನಿಮಾ ವಿಮರ್ಶೆ ಬರೆಯುತ್ತಾ ಇದ್ದಾಗ ಹೇಳುತ್ತಾ ಇದ್ದ ಮಾತು - ಅದಕ್ಕೆ ಕಾರಣ ಅವರು ತೀಕ್ಷ್ಣವಾಗಿ ವಿಮರ್ಶೆ ಮಾಡುತ್ತಾ ಇದ್ದರು. ಕನ್ನಡ ಸಿನಿಮಾ ನಿರ್ಮಾಪಕರು ನನಗೆ ಶಾಪ ಹಾಕುತ್ತಾರೆ. ಹಾಗಾಗಿ ನಾನು ಹುಳು ಆಗಿ ಜನ್ಮ ತಾಳುತ್ತೇನೆ ಎಂದು ವ್ಯಂಗ್ಯ ಮಾಡಿಕೊಳ್ಳುತ್ತ ಇದ್ದ ಸೀತಾರಾಂ ಸ್ವಲ್ಪ ಮರೆವಿನ ಸ್ವಭಾವದ ವ್ಯಕ್ತಿ ಸಹ. ಇವರ ಅನೇಕ ಕೃತಿಗಳು ಪುಸ್ತಕದ ರೂಪದಲ್ಲಿ ಬಂದಿವೆ. ಅದರಲ್ಲಿ‘ಕಾಮಯಣ’ ಪುಸ್ತಕವನ್ನು ಡಾ ವಿಷ್ಣುವರ್ಧನ ಸಹ ಓದಿ ಸೀತಾರಾಂ ಅವರನ್ನು ಹೊಗಳಿದ್ದರು. ‘ಚಪ್ಪಲಿ’ ಇವರು ಇಟ್ಟುಕೊಂಡ ಪೆನ್ ನೇಮ್. ಆ ಹೆಸರಿನಲ್ಲಿ ಬರೆದ ಅನೇಕರು‘ಚಪ್ಪಲಿ’ ಹುಡುಕಲಿಲ್ಲ ಆದರೆ ಸೀತಾರಾಂ ಅವರ ಬರವಣಿಗೆಯನ್ನು ಚಪ್ಪರಿಸಿ ಓದಿದ್ದಾರೆ.

ಕನ್ನಡ ಪ್ರಭದ ‘ಸಾಪ್ತಾಹಿಕ ಪ್ರಭ’ ಹಾಗೂ ‘ಚಿತ್ರ ಪ್ರಭ’ ಸಂಪಾದಕರು ಬಹಳ ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಬರವಣಿಗೆ ವಿಷಯಕ್ಕೆ ಬಂದರೆ ಅವರಿಗೆ ಯಾವುದೇ ಮುಲಾಜಿಲ್ಲ. ಕನ್ನಡ ಕಾಲ್ ಶೀಟ್ ಅಂತ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯಲ್ಲಿ ಸಹ ಬರೆಯುತ್ತಾ ಇದ್ದ ಸೀತಾರಾಂ ಅವರು ಮೂಲತಹ ನಂಜನಗೂಡಿನ ಶಾಸ್ತ್ರಿಗಳ ಕುಟುಂಬದವರು.

ಅಂದಿನ ಸೀತಾರಾಂ ಅವರನ್ನು ಒಂದು ಚಿತ್ರೀಕರಣದ ಮುಹೂರ್ತದಲ್ಲಿ ಜ್ಞಾಪಿಸಿಕೊಂಡರೆ ಅದು ಹೀಗಿದೆ. ಸೀತಾರಾಂ ಅವರಿಗೆ ತಿಂಡಿ ತಟ್ಟೆ ಬರುವುದು ಸ್ವಲ್ಪ ಲೇಟ್ ಆಗಿದೆ. ತಟ್ಟೆಯಲ್ಲಿ ಇಡ್ಲಿ, ವಡೆ, ಕೇಸರಿ ಬಾತ್, ಪೊಂಗಲ್, ಉಪ್ಪಿಟ್ಟು, ಚಟ್ನಿ, ಸಾಂಬಾರ್....ಐಟೆಮ್ಗಳು ಇವೆ. ಕರಿರಿ ನಿರ್ಮಾಪಕರನ್ನು ಅಂತ ಗುಡುಗಿದರು ಸೀತಾರಾಂ. ಯಾಕ್ ಸಾರ್ ಏನಾಯ್ತು... ಅಂತ ನಿರ್ಮಾಪಕರು ಬಂದರು. ಅಲ್ರೀ ನಾವು ಮನೇಲಿ ತಿಂಡಿ ತಿಂದರೆ ಇಷ್ಟೊಂದು ವೆರೈಟೀ ಇರತೇನ್ರಿ. ಸುಮ್ನೆ ಯಾಕೆ ಇಷ್ಟೊಂದು ತಿಂಡಿಗಳನ್ನು ಮಾಡಿಸಿ ನಿರ್ಮಾಣದ ವೆಚ್ಚ ಜಾಸ್ತಿ ಆಯಿತು ಅಂದು ಆಮೇಲೆ ಹೇಳ್ತೀರಿ. ನಾವು ದಿನ ನಿತ್ಯ ಸೇವಿಸುವ ಒಂದು ತಿಂಡಿ, ಕಾಫಿ ಸಾಕು ರೀ. ಎಂದಾಗ ಆ ನಿರ್ಮಾಪಕ ಸೀತಾರಾಂ ಅವರಿಗೆ ಕೈ ಮುಗಿದು ಸುಮ್ಮನೆ ನಿಂತು ಬಿಟ್ಟ. ಇದರಿಂದ ಅವರ ಸರಳ ಜೀವನ ವ್ಯಕ್ತ ಆಗುತ್ತದೆ.
 

ಡಾ ಸೀತಾರಾಂ ಅವರ ವೃತ್ತಿ ಜೀವನದ ದೊಡ್ಡ ಪೆಟ್ಟು ಅಂದರೆ ಅವರಿಂದ ಕನ್ನಡ ಪ್ರಭ ಪತ್ರಿಕೆಗೆ ಕೋಟ್ಯಂತರ ರೂಪಾಯಿ ಜಾಹೀರಾತು ನಿಂತು ಹೋಯಿತು ಎಂಬ ಹಣೆ ಪಟ್ಟಿ ಹಚ್ಚಿದ್ದರಿಂದ.


ಆಗ ನಮ್ಮೆಲ್ಲ ಗುರುಗಳು ವೈ ಎನ್ ಕೆ ಸಂಪಾದಕರು. ಮೈಸೂರಿನಲ್ಲಿ ‘ಗಂಧದ ಗುಡಿ ಭಾಗ 2’ ಮುಹೂರ್ತ. ಬೆಂಗಳೂರಿಗೆ ಬಂದವರೆ ಆ ವಾರದ ಚಿತ್ರಪ್ರಭದಲ್ಲಿ ಸೀತಾರಾಂ ಕೊಟ್ಟ ಹೆಡಿಂಗ್ ‘ವೀರಾಪ್ಪನ್ ಛಾಯೆಯಲ್ಲಿ ಗಂಧದ ಗುಡಿ ಭಾಗ 2’. ಒಂದೆರಡು ದಿವಸಗಳಲ್ಲಿ ಕನ್ನಡ ಪ್ರಭ ಪತ್ರಿಕೆಗೆ ಸಿನಿಮಾ ಜಾಹೀರಾತು ನಿಲ್ಲಿಸಬೇಕು ಅಂತ ಆಜ್ಞೆ ಸದಾಶಿವನಗರದಿಂದ ಕ್ರೆಸೆಂಟ್ ರೋಡ್ ವಾಣಿಜ್ಯ ಮಂಡಳಿ ತಲುಪಿತು. ಆಗಲೇ ಕನ್ನಡ ಪ್ರಭ ಕಚೇರಿಯಲ್ಲಿ ಸೀತಾರಾಂ ಎದುರಿಸಿದ ದೊಡ್ಡ ಸವಾಲು. ಆದರ ವೈ ಎನ್ ಕೆ ಅವರು ಸೀತಾರಾಂ ಅವರನ್ನು ಬಿಟ್ಟುಕೊಡಲಿಲ್ಲ. ಆಗಿನ ಇಂಡಿಯನ್ ಎಕ್ಸ್ಪ್ರೆಸ್ ಮನೇಜರ್ ಶಂಕರನ್ ನಾಯರ್ ಇನ್ನಿಲ್ಲದಂತೆ ಸೀತಾರಾಂ ಅವರ ಸ್ಥಾನ ಪಲ್ಲಟ ಮಾಡಲು ಪ್ರಯತ್ನಿಸಿದರು. ಸಹದ್ಯೋಗಿಗಳನ್ನು ವೈ ಎನ್ ಕೆ ಅವರು ಬಿಟ್ಟು ಕೊಡುವ ಛಾನ್ಸ್ ಇಲ್ಲ ಎಂದು ತಿಳಿದು ಜಾಹೀರಾತು ಕಾಣುವಂತೆ ಪರ್ಯಾಯ ವ್ಯವಸ್ಥೆ ಕೆಲವು ವರ್ಷ ನಡೆಯಿತು.

ಸಾರ್ವಜನಿಕರಿಗೆ ಸಿನಿಮಾ ಬಿಡುಗಡೆ ಆಗುವಾಗಲೇ ಸಿನಿಮಾ ವಿಮರ್ಶೆ ಪತ್ರಿಕೆಯಲ್ಲಿ ಬರೆಯಬೇಕು ಎಂದು ಕಾನೂನು ರೂಪಿಸಿಕೊಂಡಿದ್ದು ಸೀತಾರಾಂ ಕಾಲದಲ್ಲಿ.

ಇದೊಂದು ಮರೆಯಲಾರದ ಹೆಡಿಂಗ್ ಹೇಳಿ ಸೀತಾರಾಂ ಆತ್ಮಕ್ಕೆ ಶಾಂತಿ ಕೋರುವ. ಗವಿ ಗಂಗಾಧರೇಶ್ವರ ಗುಡಿಯಲ್ಲಿ ‘ರಾಜಣ್ಣ’ ವಿನೋದ್ ರಾಜ್ ಅಭಿನಯದ ಸಿನಿಮಾ. ವಿನೋದ್ ರಾಜ್ ಅವರಿಗೆ ಇನ್ನ ಮದುವೆ ಯಾಕೆ ಮಾಡಿಲ್ಲ ಎಂದು ಪತ್ರಕರ್ತರೊಬ್ಬರು ಲೀಲಾವತಿ ಅಮ್ಮನವರನ್ನು ಕೇಳಿದ್ದಾರೆ. ನನಗೇನೂ ಅಭ್ಯಂತರ ಇಲ್ಲ. ಒಂದಲ್ಲ ಎರಡು ಮದುವೆ ಮಾಡಿಕೊಳ್ಳಲಿ ಎಂದು ತಮಾಷೆ ಮಾಡಿದ್ದಾರೆ ಲೀಲಾವತಿ ಅವರು.

ಆ ಪತ್ರಿಕಾ ಘೋಷ್ಟಿಯ ವರದಿಯ ಹೆಡ್ ಲೈನ್ ಸೀತಾರಾಂ ಕೊಟ್ಟದ್ದು ‘ರಾಜಣ್ಣ ನಿನ್ನ ರಾಣಿ ಯಾರನ್ನ’. ಆ ವರದಿ ಮಾಡಿದವರಿಗೆ ಇರುಸು ಮುರುಸು. ಆಗಲೇ ಸೀತಾರಾಂ ಗದರಿಕೊಂಡು ಹೇಳಿದ್ದು. ವರದಿ ಕೊಡುವುದಷ್ಟೇ ವರದಿಗಾರನ ಕೆಲಸ. ಅದು ಬಂತಾ, ಬದಲಾವಣೆ ಆಯ್ತಾ ಅಂತ ಯೋಚಿಸುವುದು ಉಪ ಸಂಪಾದಕ, ಹಿರಿಯ ಉಪ ಸಂಪಾದಕರ ಕೆಲಸ. ಬೇರೆ ಕೆಲ್ಸ ನೋಡ್ಕೋಲ್ಲಿ ಎಂದು ನೆನಪಿನಲ್ಲೇ ಇದೆ.
ಡಾ ಸೀತಾರಾಂ ಬರವಣಿಗೆ ನಿಜಕ್ಕೂ ಮಾದರಿ. ಅವರ ಬರವಣಿಗೆಗಳ ಸಂಕಲನ ಯಾರಾದರೂ ಮಾಡಬಹುದು. ಅದು ದಾರಿ ದೀಪ ಆಗುವುದರಲ್ಲಿ ಸಂದೇಹವೆ ಇಲ್ಲ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed